ಕುಶಲ ಪತ್ರಗಳು
ಕುಶಲಪತ್ರದ ಬಳಕೆಗೆ ಕ್ರಿ.ಪೂ. ಎರಡನೆಯ ಮಿಲಿಯದಲ್ಲೇ ಪುರಾತನ ಬ್ಯಾಬಿಲೋನ್ ಸಾಮ್ರಾಜ್ಯಕ್ಕೆ ರೂಢಿಗೊಂಡಿತ್ತು. ಆಗ ಓದುಬರಹ ಬಲ್ಲವರೆ ಆತಿ ಕಡಿಮೆಯಾಗಿದ್ದುದರಿಂದ ಬಲ್ಲ ದೂತನ ಮುಖಾಂತರ ಸುದ್ದಿ ಸಮಾಚಾರ ಯೋಗಕ್ಷೇಮ ವಿನಿಮಯ ನಡೆಯಬೇಕಾಗಿತ್ತು. ಆದ್ದರಿಂದ ಪತ್ರದ ಕ್ರಮ ಔಪಚಾರಿಕವಾಗಿ, ಒಂದು ರೀತಿಯ ನಿರ್ಬಂದಕ್ಕೊಳಗಾಗಿ ಇರಬೇಕಾದ್ದು ಅನಿವಾರ್ಯವಾಗಿತ್ತು. ಮಧ್ಯವರ್ತಿಯ ನೆರವಿಲ್ಲದೆ ಇಬ್ಬರ ನಡುವೆ ನೇರ ಮಾತುಕತೆಗೆ ಅವಕಾಶ ದೊರಕಿಸುವ ಕುಶಲಪತ್ರ ಪ್ರಾಚೀನ ಗ್ರೀಸಿನಲ್ಲಿ ಕ್ರಿ.ಪೂ. 5ನೇಯ ಶತಮಾನದಲ್ಲಿ ಇತ್ತು. ಅಲ್ಲಿಂದೀಚೆಗೆ ಕುಶಲಪತ್ರಕ್ಕೆ ಈಗ ಇರುವ ಅರ್ಥವೂ ಒದಗಿಬಂತು. ಅದರ ಲೇಖನ ಕಟ್ಟುನಿಟ್ಟಿನ ವಿಧಿನಿರ್ಬಂಧಗಳಿಂದ ಭಾದಿತವಲ್ಲ. ಸರಳವೂ ಸುಂದರವೂ ಆದ ರೀತಿಯಲ್ಲಿ ಇಬ್ಬರು ಬಂಧುಗಳೂ ಸ್ನೇಹಿತರೂ ಆಪ್ತರಂತೆ ತಮಗೇ ಸಂಬಂಧಿಸಿದ ವಿಚಾರಗಳನ್ನು ಕುರಿತು ಸಂಭಾಷಣೆ ಮಾಡುವುದೇ ಕುಶಲಪತ್ರದ ಉದ್ದೇಶ. ಇಬ್ಬರಿಗೂ ಮಧ್ಯೆ ಇರುವ ದೂರದ ಸಲುವಾಗಿ ಸಂಭಾಷಣೆ ಪತ್ರ ಮುಖೇನ ಜರುಗುತ್ತವೆ ಅಷ್ಟೆ. ಇದು ಕುಶಲಪತ್ರದ ಸಾಮಾನ್ಯರೂಪ. ವಿಧಿವಿಹಿತವಾದ ಬಗೆಯಲ್ಲಿ ಪರಸ್ಪರ ವ್ಯವಹಾರ ನಡೆಸುವುದಕ್ಕೂ ಕುಶಲಪತ್ರ ಒದಗುತ್ತದೆ.

	ಕುಶಪತ್ರಗಳಲ್ಲಿ ಹಲವು ವಿಧಗಳುಂಟೆಂದು ಬಲು ಹಿಂದೆಯೇ ವಿದ್ವಾಂಸರು ಹೇಳಿದರು. ಅವುಗಳಲ್ಲಿ ನಾಲ್ಕೈದು ಮುಖ್ಯ ವಿಧಗಳನ್ನು ಪರಿಭಾವಿಸಿದರೆ ಸಾಕು. ನಡೆದ ಸಂಗತಿಗಳ ಕಥನ, ವಿಶಯ ಪ್ರತಿಪಾದನೆ, ಹಿತವಚನ, ನೀಡುವಿಕೆ, ಸಮಾಧಾನಸೂಚನೆ, ಅನ್ಯೋನ್ಯ ಪ್ರೇಮ_ಇದಕ್ಕನುಸಾರವಾಗಿ ಕುಶಲಪತ್ರಗಳನ್ನು ವಿಂಗಡಿಸಬಹುದು. ಇವೆಲ್ಲಾ ಸ್ವಕೀಯವಾದವು, ಖಾಸಗಿಯಾದವು. ಖಾಸಗಿ ಕುಶಲಪತ್ರದ ಮರ್ಯಾದೆಯನ್ನನುಸರಿಸಿ ಒಬ್ಬಾನೊಬ್ಬ ವ್ಯಕ್ತಿಗೆ ಬರೆದಂತೆ ಹೊರಹೊರೆಗೆ ಕಾಣಬರುವ ಆದರೆ ದಿಟವಾದ ಇತರರಿಗೂ ತಿಳಿಯಬೇಕೆಂಬ ಬಯಕೆ ಉಳ್ಳ ಬಹಿರಂಗ ಪತ್ರವೂ ಉಂಟು. ಅದರಲ್ಲಿ ವಿಷಯ ಪ್ರತಿಪಾದನೆ, ವ್ಯಕ್ತಿಯ ಖಂಡನೆ, ವಾದವಿವಾದ ತುಂಬಿರುತ್ತದೆ. ಆದ್ದರಿಂದ ಅವು ಹೆಸರಿನಿಂದ ಮಾತ್ರ ಕುಶಲಪತ್ರಗಳು.

	ಕುಶಲಪತ್ರ ಹೇಗಿರಬೇಕೆಂದು ತಿಳಿಸುವ ಪ್ರಬಂಧಗಳೂ ಅವನ್ನು ಬರೆಯಲು ಪಾಠಕಲಿಸುವ ಕೈಪಿಡಿಗಳೂ ಹೇರಳವಾಗಿವೆ. ಅವುಗಳಲ್ಲಿ ಮುಖ್ಯವಾದವು ಉತ್ಕøಷ್ಟ ಕುಶಲಪತ್ರದ ಲಕ್ಷಣಗಳನ್ನು ಹೀಗೆ ವಿವರಿಸಿವೆ: 1 ಗೆಳೆತನದ ಸೌಹಾರ್ದಭಾವ 2 ಅನಿರ್ಬಂಧ ರೀತಿ 3 ಪ್ರಾಮಾಣಿಕತೆ 4 ಸರಳತೆ 5 ನೇರತನ ಅಥವಾ ಬಿಚ್ಚು ಮನಸ್ಸು 6 ನಿರಾಡಂಬರ. ಸಹಾನುಭೂತಿಯಿಂದ ತುಂಬಿದ ಎರಡು ಹೃದಯಗಳ ಪಕ್ಕಪಕ್ಕದಲ್ಲಿ ಕುಳಿತು ಭಾವಭಾವನೆಗಳನ್ನು ತೋಡಿಕೊಳ್ಳುವಂತೆ ಇರಬೇಕು, ಲೇಖನದ ಸರಣಿ. ಈ ಗುಣಗಳಿಂದಲೇ ಕುಶಲಪತ್ರ ಸಾಹಿತ್ಯವಾಗಬಲ್ಲದು. ಪತ್ರಬರೆಯುವವನ ದಿನಚರಿ ಬಾಳಿನ ಸಾಮಾನ್ಯ ಸಂಗತಿ ಸ್ವಾರಸ್ಯಕರವಾಗಿ ಆಹ್ಲಾದ ನೀಡುವಂತಾಗುತ್ತದೆ. ವಿಲಿಯಂ ಕೂಪರ್ (1731-1800) ತನ್ನ ಒಂದು ಕುಶಲಪತ್ರದಲ್ಲಿ ಸಾಕಿದ ಮೊಲವೊಂದು ತಪ್ಪಿಸಿಕೊಂಡು ಹೋಗಿ ಆತಂಕ ಉಂಟುಮಾಡಿದ್ದನ್ನು ಚೆನ್ನಾಗಿ ನಿರೂಪಿಸಿದ್ದಾನೆ. ಅವನ ಸ್ವಚ್ಛವೂ, ಋಜುವೂ, ಮಾನವೀಯವೂ, ದಯಾಪೂರಿತವೂ ಆದ ಮನಸ್ಸು ಎದ್ದು ಕಾಣುತ್ತದೆ. ಅದರಲ್ಲಿ ತಾನು ಎಷ್ಟು ಉತ್ತಮವಾಗಿ ಕಾಗದ ಬರೆಯುತ್ತಿದ್ದೇನೆ ಎಂದು ಹಮ್ಮಿನ ತುಸು ಸೋಂಕೂ ಅಲ್ಲಿ ಕಾಣದು.

	ಕುಶಲಪತ್ರ ಕವಿಯ ವ್ಯಕ್ತಿತ್ವದ ಪರಿಚಯಕ್ಕೂ ಅವನ ಜೀವನಚರಿತ್ರೆಯ ಪರಿಚಯಕ್ಕೂ ನೆರವಾಗುತ್ತದೆ. ಅಲ್ಲದೆ ಪಾತ್ರಗಳ ಕುಶಲಪತ್ರಗಳ ಮೂಲಕವೇ ಒಳ್ಳೆಯ ಕಾದಂಬರಿಯೂ ಸೃಷ್ಟಿಯಾಗಬಲ್ಲುದು. ಇಂಗ್ಲಿಷ್ ಕಾದಂಬರಿಯ ಸ್ಥಾಪಕರಲ್ಲೊಬ್ಬನಾದ ಸ್ಯಾಮ್ಯುಅಲ್ ರಿಚರ್ಡ್‍ಸನ್ ಕುಶಲಪತ್ರಗಳ ಮೂಲಕ ಕಾದಂಬರಿಯನ್ನು ರಚಿಸುವುದನ್ನು ಜಾರಿಗೆ ತಂದ. ಸ್ಕಾಟ್ ಮೊದಲಾದವರು ಈ ಪದ್ಧತಿಯನ್ನು ಅಲ್ಲಲ್ಲೇ ಬಳಸಿಕೊಂಡಿದ್ದಾರೆ.							
	(ಎಸ್.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ